ಪ್ಯೂಮಿಸ್ -
	 ಹಗುರ ರಂಧ್ರಭರಿತ ಜ್ವಾಲಾಮುಖಿಜ ಶಿಲೆ. ಕೈಗಾರಿಕೆ ಮೊದಲಾದ ಉದ್ಯಮಗಳಲ್ಲಿ ವಸ್ತುಗಳ ಕಲೆ ತೆಗೆಯುವುದಕ್ಕೂ ಮೇಲ್ಮೈಯನ್ನು ನಯಗೊಳಿಸಿ ಹೊಳಪುಕೊಡುವುದಕ್ಕೂ ಇದರ ಬಳಕೆ ಉಂಟು. 1945ರಿಂದೀಚಿಗೆ ಇದು ಮತ್ತಷ್ಟು ಉಪಯೋಗ ಕಂಡಿದೆ. ರೈಲುಮಾರ್ಗದ ತಳಭಾಗವನ್ನು ಭದ್ರಪಡಿಸಲು ಹಾಕುವ ಜಲ್ಲಿ ಮರಳಿನಲ್ಲಿ ಮತ್ತು ಕಲ್ಲುಕಟ್ಟಡಗಳ ನಿರ್ಮಾಣಕ್ಕೆ ಮುಂಚೆ ಹಾಕುವ ಹಗುರ ಜಲ್ಲಿಗಾರೆಯಲ್ಲಿ ವ್ಯಾಪಕವಾಗಿ ಇದರ ಉಪಯೋಗವಿದೆ. 

	ಜ್ವಾಲಾಮುಖಿಯಿಂದ ಪ್ಯೂಮಿಸ್ ಹೊರಬೀಳುವಾಗ ಬಲುಮಟ್ಟಿಗೆ ದ್ರವ ಸ್ಥಿತಿಯಲ್ಲಿ ಇದ್ದು ಸ್ಫಟಿಕಗಳು ರೂಪುಗೊಳ್ಳಲು ಕಾಲಾವಕಾಶವೇ ಇಲ್ಲದಷ್ಟು ತೀವ್ರಗತಿಯಲ್ಲಿ ತಣ್ಣಗಾಗುತ್ತದೆ. ಇದರಲ್ಲಿ ವಿಲೀನವಾಗಿದ್ದ ಬಾಷ್ಟಶೀಲ ವಸ್ತುಗಳು ಇದು ಘನಸ್ಥಿತಿಗೆ ಪರಿವರ್ತನೆಯಾಗುವಾಗ ಒಡನೆ ಬಿಡುಗಡೆಯಾಗಿ ಮುದ್ದೆಯಂಥ ಇಡಿ ವಸ್ತು ನೊರೆಯಂತೆ ಹುಬ್ಬಿ ತತ್‍ಕ್ಷಣವೇ ಘನಸ್ಥಿತಿಗೆ ಕುಸಿಯುತ್ತದೆ. ಒಂದು ವೇಳೆ ಅಧಿಕ ಒತ್ತಡಗಳಲ್ಲಿರುವ ಪರಿಸ್ಥಿತಿಯಲ್ಲೇನಾದರೂ ಅದು ತಣ್ಣಗಾಗಿದ್ದರೆ ಅದರಿಂದ ಗಾಜಿನಂಥ ಶಿಲಾರಸ ಅಥವಾ ಕಾಚಶಿಲೆ ಉತ್ಪತ್ತಿಯಾಗಿರುತ್ತಿತ್ತು. 

	ವಾಸ್ತವವಾಗಿ ಕಾಚಶಿಲೆಯ (ಅಬ್ಸಿಡಿಯನ್) ತುಣುಕುಗಳನ್ನು ಒಂದು ಮೂಸೆಯಲ್ಲಿ ಹಾಕಿ ಅವು ಒಂದುಗೂಡುವ ತನಕ ಅಧಿಕೋಷ್ಣದಿಂದ ಕರಗಿಸಿದಾಗ ಅವುಗಳಲ್ಲಿ ವಿಲೀನವಾಗಿದ್ದ ಅನಿಲಗಳು ಬಿಡುಗಡೆ ಹೊಂದಿ ಈ ಕಾಚವಸ್ತು ಪ್ಯೂಮಿಸ್ ಶಿಲೆಯಾಗಿ ಪರಿವರ್ತನೆ ಹೊಂದುತ್ತದೆ. ಅನುಕೂಲ ಪರಿಸ್ಥಿತಿಗಳಿರುವ ಕಡೆ ಯಾವುದೇ ವಿಧವಾದ ಶಿಲಾರಸ ಅಥವಾ ಲಾವಾ ಪ್ಯೂಮಿಸ್ ಸ್ಥಿತಿಗೆ ತಲಪಬಹುದು. ಆದರೆ, ಬೆಸಾಲ್ಟ್ ಮತ್ತು ಆ್ಯಂಡಿಸೈಟ್ ಶಿಲೆಗಳು ಅನೇಕ ಸಂದರ್ಭಗಳಲ್ಲಿ ಈ ರೂಪದಲ್ಲಿ ಕಂಡುಬರುವುದಿಲ್ಲ. ಇದೇ ರೀತಿ ಟ್ರ್ಯಾಕೈಟ್ ಮತ್ತು ರಯೊಲೈಟ್ ಶಿಲೆಗಳು ಸಹ. ಅನೇಕ ಪ್ಯೂಮಿಸ್ ಶಿಲೆಗಳಲ್ಲಿ ಹಲವು ವಿಧದ ಸಣ್ಣ ಸ್ಫಟಿಕಗಳು ಸಿಕ್ಕುತ್ತವೆ. ಇವುಗಳ ಪೈಕಿ ಫೆಲ್ಡ್‍ಸ್ಟಾರ್ ಖನಿಜಗಳು, ಅಗೈಟ್ ಹಾರ್ನ್‍ಬ್ಲೆಂಡ್ ಮತ್ತು ಗೋಮೇಧಿಕ ಅತಿ ಸಾಮಾನ್ಯವಾಗಿ ಕಂಡುಬರುತ್ತವೆ. ಪ್ಯೂಮಿಸ್ ಶಿಲೆಯಲ್ಲಿರುವ ರಂಧ್ರಗಳು ಆಕಾರದಲ್ಲಿ ದುಂಡಗೆ ಅಥವಾ ಕೊಳವೆಯಂತೆ ಇರಬಹುದು. ಇದು ಘನರೂಪಕ್ಕೆ ಪರಿವರ್ತನೆ ಹೊಂದುತ್ತಿರುವ ಶಿಲಾರಸವನ್ನು ಅವಲಂಬಿಸಿರುತ್ತದೆ. ಹರಿಯುವ ನೀರು ತಂದು ಸೇರಿಸಿದ ಅಪ್ರಧಾನ ಖನಿಜಗಳು ಸಾಮಾನ್ಯವಾಗಿ ಜ್ವಾಲಾಮುಖಿಜ ಪುರಾತನ ಪ್ರತ್ಯಾಮ್ಲಿತ ಶಿಲೆಗಳಲ್ಲಿರುವ ರಂಧ್ರಗಳಲ್ಲಿ ಸಿಗುತ್ತವೆ. ಗಾಜಿನಂಥ ಈ ವಸ್ತು (ಪ್ಯೂಮಿಸ್) ತನಗೆ ತಾನೇ ದಾರದಂಥ ನಾರಿನ ರೂಪದ ರಚನೆಗಳನ್ನು ನಿರ್ಮಿಸುತ್ತದೆ. ಅವುಗಳಲ್ಲಿಯ ರಂಧ್ರಗಳನ್ನು ಅಂಥ ರಚನೆಗಳಿಂದ ಪ್ರತ್ಯೇಕಿಸಬಹುದು. ರಯೊಲೈಟ್ ಮತ್ತು ಟ್ರ್ಯಾಕೈಟ್ ಪ್ಯೂಮಿಸ್ ಶಿಲೆಯ ಬಣ್ಣ ಬಿಳಿಯದಾಗಿರುತ್ತದೆ. ಆದರೆ, ಆ್ಯಂಡಿಸೈಟ್ ಪ್ಯೂಮಿಸ್ ಶಿಲೆ ಅನೇಕ ವೇಳೆ ಹಳದಿ ಅಥವಾ ಕಂದು ವರ್ಣದ್ದಾಗಿರುವುದು. ಹವಾಯ್ ದ್ವೀಪದ ಪುಮೇಶಿಯಸ್ ಬಸಾಲ್ಟುಗಳ ಬಣ್ಣ ಕಗ್ಗಪ್ಪು. ಆಮ್ಲಿತ ಶಿಲೆಗಳಿಂದ (ಅಂದರೆ ಶೇಕಡ 65 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಿಲಿಕ ಅಥವಾ ಬೆಣಚು ಖನಿಜಗಳುಳ್ಳ ಅಗ್ನಿ ಶಿಲೆಗಳು) ಪ್ಯೂಮಿಸ್ ಶಿಲೆಗಳು ಹೇರಳವಾಗಿ ಮಾದರಿ ಶಿಲೆಗಳಾಗಿ ಉತ್ಪತ್ತಿಯಾಗುತ್ತವೆ. ಈ ಕಾರಣದಿಂದ ಇವು ಸಾಮಾನ್ಯವಾಗಿ ಅಬ್ಸೀಡಿಯನ್ ಜೊತೆ ನಿಕಟವಾಗಿರುವುದು ಕಂಡುಬರುತ್ತದೆ. 

	ಹಂಗೆರಿ, ಕ್ಯಾನರೀಸ್‍ನಲ್ಲಿರುವ ಟೆನಿರೈಫ್ ದ್ವೀಪಗಳು, ನ್ಯೂಜಿಲೆಂಡ್ ಪಶ್ಚಿಮ ಜರ್ಮನಿ ಮತ್ತು ಗ್ರೀಸ್ ದೇಶಗಳಲ್ಲಿ ಉತ್ತಮ ಪ್ಯೂಮಿಸ್ ಶಿಲೆಗಳು ಸಿಗುತ್ತವೆ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ರಾಕಿ ಪರ್ವತದ ರಾಜ್ಯಗಳು ಪೆಸಿಫಿಕ್ ಮಹಾ ಸಾಗರದ ಕರಾವಳಿಯ ರಾಜ್ಯಗಳು ಮತ್ತು ಹವಾಯ್ ದ್ವೀಪಗಳು ಮುಂತಾದ ಸ್ಥಳಗಳಲ್ಲಿ ಗಣಿಗಳಿಂದ ಪ್ಯೂಮಿಸನ್ನು ಪಡೆಯಲಾಗುತ್ತಿದೆ. ಪ್ಯೂಮಿಸ್ ಶಿಲೆಯ ಸಣ್ಣ ತುಣುಕುಗಳು ಭೂಮಿಯ ಮೇಲೆ ವ್ಯಾಪಕವಾಗಿ ವಿತರಣೆಗೊಂಡಿವೆ. ಸಾಗರಾಂತರಾಳದ ಕೆಲವು ಭಾಗಗಳಲ್ಲಿ ಹರಡಿರುವ ನಿಕ್ಷೇಪಗಳಲ್ಲೂ ಪ್ಯೂಮಿಸ್ ಸಿಗುತ್ತದೆ. ಅಲ್ಲಿಯೂ ಮುಖ್ಯವಾಗಿ ಸಮುದ್ರದ ಅಗಾಧ ಆಳದಲ್ಲಿ ಸಿಗುವ ಕೆಂಪು ಜೇಡಿನಲ್ಲಿ ಪ್ಯೂಮಿಸ್ ಹೇರಳವಾಗಿ ದೊರೆಯುತ್ತದೆ. ಕೆಲಮಟ್ಟಿಗೆ ಇದು ಸಮುದ್ರದೊಳಗಿನ ಜ್ವಾಲಾಮುಖಿಗಳಿಂದ ಉತ್ಪತ್ತಿಯಾಗಿ ಕೆಂಪು ಜೇಡಿನ ಜತೆ ಬೆರೆತಿರುವುದುಂಟು. ಜ್ವಾಲಾಮುಖಿಯಿಂದ ಹೊರಬಿದ್ದ ಬಳಿಕ ಇದು ಹಲವಾರು ತಿಂಗಳ ತನಕವೂ ಸಮುದ್ರದ ಮೇಲ್ಭಾಗದಲ್ಲಿ ತೇಲಾಡುತ್ತಿರುತ್ತದೆ. ಹೀಗೆ ಗಾಳಿ ಮತ್ತು ಪ್ರವಾಹಗಳ ಮೂಲಕ ಸಮುದ್ರದ ಮೇಲೆ ಇದರ ವಿತರಣೆಯಾಗುತ್ತದೆ. ಬಹುಕಾಲದ ತನಕ ಇದು ನೀರನ್ನು ಚನ್ನಾಗಿ ಹೀರಿಕೊಂಡು. ಕ್ರಮೇಣ ಸಮುದ್ರದ ಆಳವಾದ ಪ್ರದೇಶಗಳಿಗೆ ಕಂತುತ್ತದೆ. ಅಲ್ಲಿ ಇದು ಬಿರಿದು ಸಣ್ಣ ತುಣುಕುಗಳಾಗಿ ಸೂಕ್ಷ್ಮ ಕಣ ನಿಕ್ಷೇಪಗಳ ಜತೆ ಒಗ್ಗೂಡಿ ಹೋಗುತ್ತದೆ. 

	1883 ರಲ್ಲಿ ಕ್ರಕಟೋವ ಎಂಬ ಜ್ವಾಲಾಮುಖಿ ಭೀಕರವಾಗಿ ಸ್ಪೋಟಿಸಿದಾಗ ಅದು ಪ್ಯೂಮಿಸ್ ಶಿಲೆ ಮತ್ತು ದೂಳನ್ನು ಸಾವಿರಾರು ಮೀಟರುಗಳ ಎತ್ತರಕ್ಕೆ ಚಿಮ್ಮಿತು. ಇದರಿಂದ ಕೆಲವು ಕಡೆ ಅನೇಕ ಕಿಲೊಮೀಟರುಗಳಷ್ಟು ಉದ್ದವಾದ ಮತ್ತು ನೀರಿನ ಮಟ್ಟದಿಂದ 1.5 ಮೀಟರಿನಷ್ಟು ಎತ್ತರವಾದ ಪ್ಯೂಮಿಸ್ ದಿಬ್ಬ ಸಮುದ್ರದಲ್ಲಿ ನಿರ್ಮಾಣವಾಯಿತು. ಇದರ ಜೊತೆಗೆ ಅತಿಸೂಕ್ಷ್ಮವಾದ ಪ್ಯೂಮಿಸ್ ಪುಡಿ ಅತಿ ಎತ್ತರಕ್ಕೆ ಹಾರಿ, ಗಾಳಿಯಲ್ಲಿ ತೇಲಾಡಿ, ಕಡೆಗೆ ಖಂಡಗಳ ದೂರ ಭಾಗಗಳಿಗೂ ತಲಪಿತಲ್ಲದೆ ಸಾಗರಗಳಿಗೂ ಸೇರಿತು. 		(ಎಂ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ